ಮನಮೋಹನ್ ಸಿಂಗ್
(1932- ). ದೇಶದ 14ನೆಯ ಪ್ರಧಾನಮಂತ್ರಿ. ಮೇ 22, 2004ರಂದು ಯು.ಪಿ.ಎ. ಸರ್ಕಾರದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ. ಎನ್.ಡಿ.ಎ.ಗೆ ಬಹುಮತ ದೊರಕದೆ ಕಾಂಗ್ರೆಸ್ ಮೈತ್ರಿಕೂಟಕ್ಕೆ ಹೆಚ್ಚು ಬೆಂಬಲ ದೊರಕಿದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಸ್ವತಃ ತಾವು ಪ್ರಧಾನಮಂತ್ರಿಯಾಗದೇ ಡಾ. ಮನಮೋಹನ್‍ಸಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ಸೂಚಿಸುತ್ತಾರೆ. ಡಾ. ಸಿಂಗ್ ಅವರಿಗೆ ಇದೊಂದು ಆಶ್ಚರ್ಯಕರ ಉಡುಗೊರೆ. ಆದರೆ ಅವರು ಈ ಹುದ್ದೆ ನಿಭಾಯಿಸಲು ಎಲ್ಲ ರೀತಿಯಿಂದಲೂ ಅರ್ಹರು.

ಡಾ. ಸಿಂಗ್ ಒಬ್ಬ ವಿದ್ವಾಂಸ ಹಾಗೂ ಚಿಂತಕ. ಸರಳ ಸುಲಭವಾಗಿ ಭೇಟಿಯಾಗಲು ಸಾಧ್ಯವಿರುವ, ಶ್ರದ್ಧಾಪೂರ್ಣ ದುಡಿಮೆಯ ಕೆಲಸದಕಡೆ ಶೈಕ್ಷಣಿಕ ದೃಷ್ಟಿಕೋನ ಹೊಂದಿರುವರೆಂದೇ ಚಿರಪರಿಚಿತರು. ಅವಿಭಜಿತ ಪಂಜಾಬಿನ ಹಳ್ಳಿಯೊಂದರಲ್ಲಿ ಸೆಪ್ಟೆಂಬರ್ 26, 1932ರಂದು ಜನನ. 1948ರಲ್ಲಿ ಫರಿದಾಬಾದ್ ವಿಶ್ವವಿದ್ಯಾಲಯದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆ. ಅಲ್ಲಿಂದ ಬ್ರಿಟನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ. 1957ರಲ್ಲಿ ಅರ್ಥಶಾಸ್ತ್ರದಲ್ಲಿ ಮೊದಲ ದರ್ಜೆಯಲ್ಲಿ ಆನರ್ಸ್ ಪದವಿ ಪಡೆದರು. 62ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಹಾಗೂ ಪ್ರತಿಷ್ಠಿತ ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಡಾ. ಸಿಂಗ್‍ರವರ ಪ್ರತಿಭೆ ಅರಳಿತು. ಇದೇ ಸಮಯದಲ್ಲಿ ಅವರು ಕಾರ್ಯಾಲಯದಲ್ಲೂ ಕೆಲಸ ನಿರ್ವಹಿಸಿದರು. 1987ರಿಂದ 90ರವರೆಗೆ ಜಿನೀವಾದಲ್ಲಿ ದಕ್ಷಿಣ ಆಯೋಗದ ಮಹಾಪ್ರಧಾನ ಕಾರ್ಯದರ್ಶಿಗಳಾಗಿದ್ದರು.

1971ರಲ್ಲಿ ವಾಣಿಜ್ಯ ಸಚಿವ ಖಾತೆಯ ಆರ್ಥಿಕ ಸಲಹೆಗಾರರಾಗಿ ಭಾರತ ಸರ್ಕಾರವನ್ನು ಸೇರಿದರು. ತರುವಾಯ 1972ರಲ್ಲಿ ಅರ್ಥ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾದರು. ಹಣಕಾಸು ಇಲಾಖೆಯ ಕಾರ್ಯದರ್ಶಿ, ಯೋಜನಾ ಆಯೋಗದ ಉಪಾಧ್ಯಕ್ಷ, ರಿಸರ್ವ್ ಬ್ಯಾಂಕಿನ ಗೌರ್ನರ್, ಪ್ರಧಾನ ಮಂತ್ರಿಗಳ ಸಲಹೆಗಾರ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ-ಹೀಗೆ ಅವರು ಹೊತ್ತುಕೊಂಡ ಜವಾಬ್ದಾರಿ ಹಲವು. 

ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ನವಮನ್ವಂತರವನ್ನು ಸಾರಿದ 5 ವರ್ಷಗಳೆಂದರೆ 1991 ರಿಂದ 96. ಆಗ ಇವರು ದೇಶದ ಹಣ ಕಾಸು ಸಚಿವರು. ಆರ್ಥಿಕ ಸುಧಾರಣೆಗಳ ಸಮಗ್ರ ನೀತಿಯನ್ನು ಜಾರಿಗೆ ಕೊಡುವುದರಲ್ಲಿ ಡಾ|| ಸಿಂಗ್‍ರವರ ಪಾತ್ರ ಈಗ ವಿಶ್ವಮಾನ್ಯ. ಈ ಅವಧಿ ಡಾ|| ಸಿಂಗ್ ಅವರ ವ್ಯಕ್ತಿತ್ವದೊಡನೆ ಹಾಸುಹೊಕ್ಕಾಗಿ ಬಿಟ್ಟಿದೆ. 1991ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ಹಾಗೂ 1998-2004ರ ಅವಧಿಯಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಧಾನಿಯಾಗಿ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದ ಮೇಲೆ ಅವರಿಗೆ ಅವರೇ ಆರಂಭಿಸಿದ ಆರ್ಥಿಕ ಸುಧಾರಣೆಗಳನ್ನು ಮುಂದುವರೆಸಿಕೊಂಡು ಹೋಗಲು ಅನೇಕ ಅಡ್ಡಿ ಆತಂಕಗಳನ್ನು ಎದುರಿಸಬೇಕಾದ ಪ್ರಸಂಗ. 2020ರ ವೇಳೆಗೆ ಭಾರತವನ್ನು ಪ್ರಬಲ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವುದರಲ್ಲಿ ಪ್ರಧಾನಿಯಾಗಿ ಡಾ|| ಸಿಂಗ್ ಕೊಡುಗೆ ಗಣನೀಯ. ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿರುವ ಡಾ|| ಮನಮೋಹನ್‍ಸಿಂಗ್ ಅವರಿಗೆ 1987ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸಂದಿದೆ. ಭಾರತ ಪಾಕಿಸ್ತಾನ ನಡುವೆ ನಡೆದಿರುವ ಶಾಂತಿ ಪ್ರಕ್ರಿಯೆ ಒಂದು ಅಂತಿಮ ಪರಿಹಾರ ಕಾಣುವ ಹಂತಕ್ಕೆ ಒಯ್ಯಲು ಶ್ರಮನಿರತರು. 		    
										(ಕೆ.ಎಸ್.ಅಚ್ಯುತನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ